Close

ಆಸಕ್ತಿಯ ಸ್ಥಳಗಳು

ವೀರನಾರಾಯಣ ದೇವಸ್ಥಾನ

ವೀರನಾರಾಯಣ ದೇವಸ್ಥಾನ

ಹೊಯ್ಸಳ ದೊರೆ ಬಿಟ್ಟದೇವನು ಶ್ರೀ ರಾಮಾನುಜಾಚಾರ್ಯರಿಂದ ದೀಕ್ಷೆ ಪಡೆದು ವೈಷ್ಣವನಾದ ಮೇಲೆ ಗುರುವಿನ ಆಜ್ಞೆಯಂತೆ 1117ರಲ್ಲಿ ಶ್ರೀ ವೀರನಾರಾಯಣ ದೇವಸ್ಥಾನ ಕಟ್ಟಿಸಿದನೆಂದು ಪ್ರತೀತಿ ಇದೆ. ಆತ ಕಟ್ಟಿಸಿದ ಪಂಚನಾರಾಯಣ ದೇವಸ್ಥಾನಗಳಲ್ಲಿ ಇದೂ ಒಂದು. ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರ ಶಿಲ್ಪಗಳ ಸುಂದರ ಸಂಗಮ ಶ್ರೀ ವೀರನಾರಾಯಣ ದೇವಸ್ಥಾನ. ಗರ್ಭಗುಡಿ ಹಾಗೂ ಅದರ ಮೇಲಿನ ಶಿಲಾಗೋಪುರ ಚಾಲುಕ್ಯ ಶಿಲ್ಪದ ಮಾದರಯಲ್ಲಿದ್ದರೆ, ಗರುಡಗಂಭ, ರಂಗಮಂಟಪಗಳು ಹೊಯ್ಸಳ ಶಿಲ್ಪದ ಮಾದರಿಗಳಾಗಿವೆ. ಗುಡಿಯ ಮಹಾದ್ವಾರ ಗೋಪುರ ವಿಜಯನಗರ ಶೈಲಿಯದು.

ದೇವಸ್ಥಾನದ ಭವ್ಯ ಮಹಾದ್ವಾರವನ್ನು ದಾಟಿ ಒಳಗೆ ಪ್ರವೇಶಿಸಿದ ಕೂಡಲೇ ಎದುರಾಗುವುದು ಗರುಡಗಂಭ. ಈ ಕಂಭದ ಹತ್ತಿರ ಶ್ರೀವೈಷ್ಣವರ ಮೂರ್ತಿ ಇದೆ. ಮೆಟ್ಟಿಲು ಏರಿ ದೇವಸ್ಥಾನ ಪ್ರವೇಶಿಸಿದರೆ ಶಿಲ್ಪಕಲೆಯನ್ನರಳಿಸಿಕೊಂಡು ನಿಂತ ಕಂಭಗಳಿವೆ. ಇಲ್ಲಿಯೇ ಒಂದು ಕಂಭದ ಕೆಳಗೆ ಕುಳಿತು ಮಹಾಕವಿ ಕುಮಾರವ್ಯಾಸನು “ಕರ್ಣಾಟ ಭಾರತ ಕಥಾಮಂಜರಿ” ಬರೆದನೆಂದು ಪ್ರತೀತಿ. ನಂತರ ಬರುವುದು ಮಧ್ಯರಂಗ. ಆನಂತರ ಗರ್ಭಗುಡಿ.

ಗರ್ಭಗುಡಿಯಲ್ಲಿ ನೀಲಮೇಘಶ್ಯಾಮವರ್ಣ ಶಿಲೆಯಲ್ಲಿ ಕೆತ್ತಿದ ಶ್ರೀ ವೀರನಾರಾಯಣಸ್ವಾಮಿಯ ಅಪೂರ್ವ ವಿಗ್ರಹವಿದೆ. ಕಿರೀಟ, ಕರ್ಣಕುಂಡಲ, ಶಂಖ, ಚಕ್ರ, ಗದಾ, ಪದ್ಮ ಅಭಯಹಸ್ತಗಳಿಂದ ಭೂಷಿತನಾದ, ವೀರಗಚ್ಚೆ ಹಾಕಿನಿಂತ ಶ್ರೀ ವೀರನಾರಾಯಣ ಮೂರ್ತಿ ಮೋಹಕವಾಗಿದೆ. ವಿಶಾಲ ಪಕ್ಷಸ್ಥಲದಲ್ಲಿ ಲಕ್ಷ್ಮಿ, ಪೀಠ ಪ್ರಭಾವಳಿಯಲ್ಲಿ ದಶಾವತಾರ, ಎಡಬಲಗಳಲ್ಲಿ ಲಕ್ಷ್ಮೀ ಗರುಡರು ನಿಂತಿದ್ದಾರೆ. ಈ ದೇವಾಲಯದ ಪ್ರಾಂಗಣದಲ್ಲಿ ಲಕ್ಷ್ಮೀ ನರಸಿಂಹ ದೇವಾಲಯ, ಸರ್ವೇಶ್ವರ ದೇವಾಲಯ, ಮುಂತಾದ ಪರಿವಾರ ದೇವತೆಯ ಗುಡಿಗಳಿವೆ.

ತ್ರಿಕುಟೇಶ್ವರ ದೇವಸ್ಥಾನ

ತ್ರಿಕುಟೇಶ್ವರ ದೇವಸ್ಥಾನ

‘ಸ್ವಯಂಭೂ ಈಶ್ವರ’, ‘ತ್ರೈಪುರುಷ’, ‘ಸ್ವಯಂಭೂ ತ್ರುಕುಟೇಶ್ವರ’ ಎಂದು ಕಾಲದಿಂದ ಕಾಲಕ್ಕೆ ಕರೆಸಿಕೊಂಡ ತ್ರಿಕುಟೇಶ್ವರ ದೇವಸ್ಥಾನ ಕ್ರಿ.ಶ. 1002ರಲ್ಲಿ ನಿರ್ಮಾಣವಾಗಿದೆ. ಇದು ಕಲ್ಯಾಣ ಚಾಲುಕ್ಯ-ವಾಸ್ತುಶಿಲ್ಪವಾಗಿದ್ದು, ಹೊಯ್ಸಳ ಹಾಗೂ ವಿಜಯನಗರ ಅರಸರಿಂದ ಇದು ಅಭಿವೃದ್ಧಿಗೊಂಡಿದೆ. ಗರ್ಭಗುಡಿಯಲ್ಲಿ ತ್ರುಕುಟೇಶ್ವರ ಸ್ಥಿತನಾಗಿದ್ದು ಇದು ಸ್ವಯಂಭೂ ಎಂದೂ, ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರತಿರೂಪವೆಂದೂ ‘ಕೃತಪುರ ಮಹಾತ್ಮೆ’ ಯಲ್ಲಿ ವಿವರಿಸಲಾಗಿದೆ.

ಕಲಾತ್ಮಕ ಕುಸುರಿ ಕೆತ್ತನೆಯಿಂದ ಕೂಡಿ, 42 ಕಂಬಗಳುಳ್ಳ ಸಭಾ ಮಂಟಪವಿದೆ. ಸಭಾಮಂಟಪದಲ್ಲಿ ನಡೆವ ನೃತ್ಯ ನೋಡಲು ಸುತ್ತಲೂ ಕಕ್ಷಾಸನಗಳಿವೆ. ಈ ದೇವಸ್ಥಾನದ ಸಭಾಮಂಟಪ ಹಾಗೂ ಅಂತರಾಳದ ಬಾಗಿಲು ಚೌಕಟ್ಟುಗಳ ಮೇಲಿನ ಪಟ್ಟಿಕೆಗಳಲ್ಲಿ ಸುಂದರ ಉಬ್ಬುಶಿಲ್ಪಗಳಿವೆ. ನೃತ್ಯ ಗಣಪತಿ, ಬ್ರಹ್ಮ, ಶಿವ, ವಿಷ್ಣು, ಕಾರ್ತಿಕೇಯ, ಗಜಲಕ್ಷ್ಮಿ, ಅಂತರಾಳದ ಗೋಡೆಯ ಹೊರ ಮೈಯಲ್ಲಿರುವ ಮಹಾಕಾಳಿ, ಮನ್ಮಥ, ಭೈರವ ಮುಂತಾದ ಶಿಲ್ಪಗಳಿವೆ. ಆರು ಹಸ್ತಗಳ ನೃತ್ಯ ಗಣಪತಿ, ನೃತ್ಯ ಭಂಗಿಯ ಅಷ್ಟ ಮಾತೃಕೆಯರು ಹಾಗೂ ಅಂಗೈಯಲ್ಲಿ ಶಿವಲಿಂಗಗಳನ್ನು ಹಿಡಿದುಕೊಂಡು ನಿಂತಿರುವ ದಂಪತಿಗಳ ಉಬ್ಬು ಚಿತ್ರಗಳು ಅಪರೂಪವಾಗಿವೆ. ಸಭಾಮಂಟಪದ ಈಶಾನ್ಯ ದಿಕ್ಕಿನಲ್ಲಿರುವ ನಟರಾಜನ ಮೂರ್ತಿಯು ತುಂಬ ಚೆಲುವಾಗಿ ಕೆತ್ತಲಾಗಿದೆ.

ಬಸವೇಶ್ವರ ಪ್ರತಿಮೆ

Basaveshwar Statue

ವಿಶ್ವದ ಅತಿದೊಡ್ಡ ಬಸವೇಶ್ವರ ಪ್ರತಿಮೆ ಗದಗ ನಗರದಲ್ಲಿದೆ. ಇದು 116.7 ಅಡಿ ಎತ್ತರದ ಸತು ಲೋಹವನ್ನು ಸಿಂಪಡಿಸಿದ ಕಾಂಕ್ರೀಟ್ ಪ್ರತಿಮೆ. 12 ನೇ ಶತಮಾನದಲ್ಲಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಸಾಮಾಜಿಕ ಸುಧಾರಕ ಶ್ರೀ ಬಸವೇಶ್ವರ. ಬಸವೇಶ್ವರರು ತಮ್ಮ  ವಚನ ಸಾಹಿತ್ಯ ಮತ್ತು ಆಡಳಿತದ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ನೀಡಿದ ಕೊಡುಗೆಯನ್ನು ಪ್ರಪಂಚವು ಗೌರವಿಸುತ್ತದೆ. ಸರೋವರದ ಸುತ್ತಲೂ ಸುಂದರವಾದ ಉದ್ಯಾನವನದ ಮಧ್ಯದಲ್ಲಿರುವ ದೊಡ್ಡ ಪ್ರತಿಮೆಯು ಗದಗ ನಗರದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಸರೋವರದ ದೊಡ್ಡ ಗಾತ್ರದ ಕಾರಣ ಇದನ್ನು ಭೀಷ್ಮ ಕೆರೆ ಎಂದು ಕರೆಯಲಾಗುತ್ತದೆ ಮತ್ತು ಮಹಾಭಾರತದಿಂದ ಅರ್ಜುನ ಮತ್ತು ಭೀಷ್ಮರ ನಡುವಿನ ಯುದ್ಧದ ಪ್ರತಿಮೆಗಳನ್ನು ಪ್ರವೇಶದ್ವಾರದಲ್ಲಿ ರಚಿಸಲಾಗಿದೆ. ಪ್ರತಿಮೆಯ ಕೆಳಗೆ ಬಸವೇಶ್ವರಕ್ಕೆ ಸಮಕಾಲೀನರಾಗಿದ್ದ ಸಾಮಾಜಿಕ ಸುಧಾರಕರ ಜೀವನ ಚರಿತ್ರೆಯ ಆರ್ಟ್ ಗ್ಯಾಲರಿಯನ್ನು ಶಿಲ್ಪದಲ್ಲಿ ಪ್ರಸ್ತುತಪಡಿಸಲಾಗಿದೆ. ಪ್ಲೇ ಪಾರ್ಕ್, ರೆಸ್ಟೋರೆಂಟ್‌ಗಳು ಮತ್ತು ಸರೋವರದಲ್ಲಿ ದೋಣಿ ವಿಹಾರಕ್ಕೆ ಭೇಟಿ ನೀಡುವವರನ್ನು ಆಹ್ವಾನಿಸುತ್ತದೆ.