Close

ಇತಿಹಾಸ

ಗದಗ ಜಿಲ್ಲೆ : ಇತಿಹಾಸ – ಭೂಗೋಲ

24-08-1997 ರಂದು ‘ಗದಗ’ ನೂತನ ಜಿಲ್ಲೆಯಾಗಿ ಉದಯವಾಯಿತು. ಪ್ರಾಚೀನ ಕಾಲದಿಂದಲೂ ಕಲೆ-ಸಾಹಿತ್ಯ-ಸಂಸ್ಕೃತಿ-ಆಧ್ಯಾತ್ಮ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಈ ಪ್ರದೇಶ ನಿಸರ್ಗ ಸೌಂದರ್ಯದ ನೆಲೆಬೀಡೂ ಹೌದು. ಮನಮೋಹಕ ಶೀಲ್ಪಕಲೆಯನ್ನೊಳಗೊಂಡ ದೇವಾಲಯಗಳು, ಬಸದಿಗಳು, ಪ್ರಾಚೀನ ಸ್ಮಾರಕಗಳು, ಶ್ರೇಷ್ಠ ಸಾಹಿತ್ಯ ರಚಿಸಿದ ಖ್ಯಾತ ಕವಿಗಳು, ಬರಹಗಾರರು, ನಟ-ನಿರ್ದೇಶಕರು, ಆಧ್ಯಾತ್ಮ ಜಿಜ್ಞಾಸುಗಳು, ಸಮಾಜ ಸುಧಾರಕರು, ಜನರನ್ನು ಸನ್ಮಾರ್ಗದಲ್ಲಿ ನಡೆಯಿಸುವ ಧರ್ಮಾಧಿಕಾರಿಗಳಿಂದ ಈ ಜಿಲ್ಲೆಯ ಆಂತರಿಕ ಸಂಪತ್ತು ಅದ್ವಿತೀಯವೆನಿಸಿದೆ.

ಪ್ರಾದೇಶಿಕ ಪರಿಚಯ

ಗದಗ ಜಿಲ್ಲೆ ಕರ್ನಾಟಕ ರಾಜ್ಯದ ಉತ್ತರಕ್ಕಿದ್ದು ಉತ್ತರ ಅಕ್ಷಾಂಶ 15,15, ಪೂರ್ವ ರೇಖಾಂಶ 25,20 ಮತ್ತು 25,47ರ ಮಧ್ಯದಲ್ಲಿರುತ್ತದೆ. ಗಡಿ ಜಿಲ್ಲೆಗಳಾಗಿ ಪೂರ್ವಕ್ಕೆ ಕೊಪ್ಪಳ, ಪಶ್ಚಿಮಕ್ಕೆ ಧಾರವಾಡ, ಉತ್ತರಕ್ಕೆ ಬಾಗಲಕೋಟೆ ಮತ್ತು ದಕ್ಷಿಣಕ್ಕೆ ಹಾವೇರಿ, ಬಳ್ಳಾರಿ ಜಿಲ್ಲೆಗಳಿವೆ.

ಇದು ಒಂದು ಒಳನಾಡು ಬಯಲು ಪ್ರದೇಶದ ಜಿಲ್ಲೆ. ಉತ್ತರದ ಗಡಿಯಲ್ಲಿ ಮಲಪ್ರಭೆ, ದಕ್ಷಿಣದ ಗಡಿಯಲ್ಲಿ ತುಂಗಭದ್ರೆ ನದಿಗಳು ಹರಯುತ್ತವೆ. ಇದಲ್ಲದೆ ಜಿಲ್ಲೆಯಲ್ಲಿ ಹರಿದಿರುವ ಬೆಣ್ಣೆಹಳ್ಳ, ರೋಣ ತಾಲ್ಲೂಕಿನಲ್ಲಿ ಮಲಪ್ರಭಾ ನದಿಯನ್ನು ಸೇರುತ್ತದೆ. ಜಿಲ್ಲೆಯಾದ್ಯಂತ ಕಪ್ಪುಮಣ್ಣು, ಅಲ್ಲಲ್ಲಿ ಮಸಾರಿ ಭೂಮಿಯೂ ಇದೆ.

ಗಂಗಾ-ತುಂಗಾ ಪ್ರತಿಮೆ, ಗದಗ

ಉಷ್ಣಾಂಶದಿಂದ ಕೂಡಿದ ಹಿತಕರ ಮತ್ತು ಆರೋಗ್ಯಕರ ಹವಾಮಾನವನ್ನು ಜಿಲ್ಲೆಯೊಳಗೊಂಡಿದೆ. ಫೆಬ್ರುವರಿಯಿಂದ ಮೇ ವರೆಗೆ ಬೇಸಿಗೆ ಕಾಲ, ಜೂನ್ ದಿಂದ ಸಪ್ಟೆಂಬರ್ ವರೆಗೆ ಮುಂಗಾರು ಮಳೆಗಾಲದಿಂದ ಹವೆ ತಂಪಾಗಿರುತ್ತದೆ. ಅಕ್ಟೋಬರ್ – ನವೆಂಬರ್ ತಿಂಗಳುಗಳಲ್ಲಿ ಈಶಾನ್ಯ ಮಾರುತ ಕಾರಣವಾಗಿ ಮಳೆ ಬೀಳುವ ಸಾಧ್ಯತೆಗಳಿವೆ. ಡಿಸೆಂಬರ್ ದಿಂದ ಫೆಬ್ರುವರಿ ವರೆಗೆ ಚಳಿಗಾಲ. ಏಪ್ರೀಲ್-ಮೇ ತಿಂಗಳಲ್ಲಿ ಗರಿಷ್ಠ ಉಷ್ಣಾಂಶ 47 ಸೆಂ.ಗ್ರೆ. ಮತ್ತು ಡಿಸೆಂಬರ್-ಜನೇವರಿ ತಿಂಗಳುಗಳಲ್ಲಿ ಕನಿಷ್ಠ ಉಷ್ಣಾಂಶ 16 ಸೆಂ.ಗ್ರೆ. ವರೆಗೂ ಇರುತ್ತದೆ.


ಧಾರ್ಮಿಕ ಅಂಶ

ಧರ್ಮ ಸಮನ್ವಯ

“ಕಸವರವೆಂಬುದು ನೆರೆ ಸೈರಿ ಸಲಾರ್ಪೋಡೆ ಪರಧರ್ಮಮುಂ ಪರ ವಿಚಾಮುಮಂ” ಎನ್ನುತ್ತಾನೆ ಕನ್ನಡದ ಮೊದಲ ಲಾಕ್ಷಣಿಕ ಶ್ರೀ ವಿಜಯ. ಧರ್ಮ ಸಹಿಷ್ಣುತೆಗೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಜಿಲ್ಲೆ ಗದಗ. ವೈಷ್ಣವ ಸಂಪ್ರದಾಯದ ಶ್ರೀ ವೀರನಾರಾಯಣ ದೇವಾಲಯ, ಶೈವ ಸಂಪ್ರದಾಯದ ಶ್ರೀ ತ್ರಿಕುಟೇಶ್ವರ ದೇವಾಲಯ ಹಾಗೂ ಇಸ್ಲಾಂ ಧರ್ಮದ ಜುಮ್ಮಾಮಸೀದಿ ಈ ಮೂರು ಧಾರ್ಮಿಕ ಸಂಸ್ಥೆ ಸೇರಿ ಒಂದೇ ಟ್ರಸ್ಟ್ ಇರುವುದು ವಿಶ್ವಕ್ಕೆ ಮಾದರಿ. ಶಿರಹಟ್ಟಿಯ ಫಕ್ಕೀರೇಶ್ವರ, ವರವಿಯ ಮೌನೇಶ್ವರ ಹಿಂದೂ-ಇಸ್ಲಾಂ ಎರಡೂ ಧರ್ಮಗಳ ಸಮನ್ವಯ ಸಾಮರಸ್ಯ ಕೇಂದ್ರಗಳು. ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠವಂತೂ ಸರ್ವಧರ್ಮಗಳಿಗೆ ಮುಕ್ತವಾಗಿ ಬಾಗಿಲನ್ನು ತೆರೆದ ಸರ್ವಧರ್ಮೀಯರ ಶ್ರದ್ಧಾಕೇಂದ್ರ. ಲಕ್ಷ್ಮೇಶ್ವರದ ದೂದ ಪೀರಾಂ ಸೂಫೀ ಗದ್ದುಗೆಯು ಹಿಂದೂ ಮುಸ್ಲಿಂಮರಿಗೆ ಸಮಾನ ಪೂಜ್ಯ ಸ್ಥಳ.

ತಮಸೋಮಾ ಜ್ಯೋತಿರ್ಗಮಯ

ತಾವು ಸ್ವತ: ಕುರುಡರಾಗಿದ್ದರೂ ಅನೇಕ ಅಂಧರ ಬದುಕಿಗೆ ಬೆಳಕಾದವರು ಪಂ. ಪಂಚಾಕ್ಷರಿ ಗವಾಯಿಗಳವರು ಹಾಗೂ ಆಸ್ಥಾನ ಸಂಗೀತ ವಿದ್ವಾನ್ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು. ಶ್ರೀ ವೀರೇಶ್ವರ ಪುಣ್ಯಾಶ್ರಮವೆಂದೇ ಖ್ಯಾತವಾದ ಗವಾಯಿಗಳ ಆಶ್ರಮ ಸಹಸ್ರಾರು ಅಂಧ ಹಾಗೂ ನಿರ್ಗತಿಕರಿಗೆ ಅನ್ನ, ಅರಿವೆ, ಅರಿವು, ಆಶ್ರಯ ಒದಗಿಸಿ ಸಲುಹಿದೆ.  ತೊಂಟದಾರ್ಯಮಠ ಹಾಗೂ ಶಿವಾನಂದ ಮಠಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿವೆ. ಸ್ವಾಮಿ ವಿವೇಕಾನಂದ ಆಶ್ರಮವೂ ಜನತೆಯನ್ನು ಆಧ್ಯಾತ್ಮ ಪಥದಲ್ಲಿ ಮುನ್ನಡೆಸುತ್ತಿದೆ.

ಗದಗ, ಲಕ್ಷ್ಮೇಶ್ವರಗಳ ಜುಮ್ಮಾ ಮಸೀದಿಗಳು, ಲಕ್ಷ್ಮೇಶ್ವರದ ದೂದ ಪೀರಾಂ ದರ್ಗಾ, ಮುಳಗುಂದ ಸಮೀಪದ ದಾವಲಮಲಿಕ ಗುಡ್ಡದ ದರ್ಗಾ, ಇಸ್ಲಾಂ ಧರ್ಮದ ಶ್ರದ್ಧಾ ಕೇಂದ್ರವಾಗಿದ್ದರೆ, ಬೆಟಗೇರಿಯ ಎಸ್.ಪಿ.ಜಿ. ಚರ್ಚ್, ಬಾಷೆಲ್ ಮಿಶನ್ ಚರ್ಚ್, ರೋಮನ್ ಕೆಥೋಲಿಕ್ ಚರ್ಚ್ ಗಳು ಕ್ರಶ್ಚಿಯನ್ ಬಂಧುಗಳ ಪ್ರಾರ್ಥನಾ ಸ್ಥಳಗಳಾಗಿವೆ.


ಸಾಹಿತ್ಯ – ಸಂಸ್ಕೃತಿ – ಕ್ರೀಡಾಲೋಕ

ಕವಿಗಳ ನೆಲೆವೀಡು

ಕವಿ ಕುಮಾರವ್ಯಾಸರ ಕರ್ಮಭೂಮಿ, ಕವಿ ಚಾಮರಸರ ಜನ್ಮಭೂಮಿ (ನಾರಾಯಣಪುರ), ಗದಗ ಜಿಲ್ಲೆ. ಅಲ್ಲದೆ ರೋಣ ತಾಲ್ಲೂಕಿನ ಸವಡಿ ಗ್ರಾಮದ ದುರ್ಗಸಿಂಹ, ಮುಳಗುಂದದ ನಯಸೇನ, ಮಲ್ಲಿಸೇನ, ಬಾಲಲೀಲಾ ಮಹಾಂತ ಶಿವಯೋಗಿ, ಲಕ್ಕುಂಡಿಯ ಮುಕ್ತಾಯಕ್ಕ, ಲಕ್ಷ್ಮೇಶ್ವರದ ಆಚಣ್ಣ, ಪರಮಭಕ್ತ ಕವಿ, ಸುರಂಗ ಕವಿ, ಬೆಟಗೇರಿಯ ಸಿದ್ದಮಲ್ಲಾರಾಯ, ದಾನಪ್ರಿಯ, ನರಗುಂದದ ಶ್ರೀಧರಾಚಾರ್ಯ ಮುಂತಾದ ಕವಿಕೋಗಿಲೆಗಳ ಪುಣ್ಯಾಧಾಮವಿದು.

ಆಧುನಿಕ ಸಾಹಿತ್ಯ ಕ್ಷೇತ್ರಕ್ಕೂ ಗದಗ ಜಿಲ್ಲೆಯ ಕೊಡುಗೆ ದೊಡ್ಡದು. ಹುಯಿಲಗೋಳ ನಾರಾಯಣರಾಯರು, ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು, ಶಾಂತಕವಿಗಳು, ಸಂಗ್ಯಾ-ಬಾಳ್ಯಾ ಖ್ಯಾತಿಯ ಪತ್ತಾರ ಮಾಸ್ತರ, ರಂ.ಶ್ರೀ.ಮುಗಳಿ, ಡಾ.ಆರ್.ಸಿ.ಹಿರೇಮಠ, ಕವಿ ಸಂ.ಶಿ.ಭೂಸನೂರಮಠ, ಚೆನ್ನವೀರ ಕಣವಿ, ಸೋಮಶೇಖರ ಇಮ್ರಾಪುರ, ಎಂ.ಎಸ್.ಸುಂಕಾಪುರ, ಕೋಡಿಕೊಪ್ಪದ ಬಸವರಾಜ ಶಾಸ್ತ್ರಿ, ಬಿ.ವಿ.ಮಲ್ಲಾಪುರ, ನಾಟಕಕಾರ ಗರೂಡ ಸದಾಶಿವರಾಯರು, ಎಚ್.ಎನ್.ಹುಗಾರ, ಫ.ಶಿ.ಭಾಂಡಗೆ, ಎನ್ಕೆ ಕುಲಕರ್ಣಿ, ಕೆ.ಬಿ.ಅಂಗಡಿ, ಜಿ.ಎನ್.ಜಾಡಗೌಡರ, ಎಂ. ಜೀವನ ಮುಂತಾದವರೆಲ್ಲ ಕನ್ನಡ ಸಾಹಿತ್ಯಕ್ಕೆ ಗದಗ ಜಿಲ್ಲೆ ಸಲ್ಲಿಸಿದ ಸಾಹಿತ್ಯ ಸುಮಗಳು.

ಶಿಲ್ಪಕಲಾ ಮತ್ತು ಚಿತ್ರಕಲಾ ವೈಭವ

ಕಲ್ಯಾಣಿ ಚಾಲುಕ್ಯ ಹೊಯ್ಸಳ, ವಿಜಯನಗರ ಶೈಲಿಯ ಪ್ರಾಚೀನ ದೇಗುಲಗಳು, ಜಿಲ್ಲೆಯ ಸಾಂಸ್ಕೃತಿಕ ಸಂಪತ್ತು. ಗದಗ ಪಟ್ಟಣದಲ್ಲಿರುವ ವೀರನಾರಾಯಣ, ತ್ರಿಕುಟೇಶ್ವರ, ಸರಸ್ವತಿ ದೇವಾಲಯಗಳು, ಲಕ್ಕುಂಡಿಯಲ್ಲಿರುವ ಸೂರ್ಯ ದೇವಾಲಯ, ಕಾಶಿ ವಿಶ್ವೇಶ್ವರ ದೇವಾಲಯಗಳು, ದಾನ ಚಿಂತಾಮಣಿ ಅತ್ತಿಮಬ್ಬೆ ನಿರ್ಮಿಸಿದ ಬ್ರಹ್ಮ ಜಿನಲಯ, ಡಂಬಳದ ದೊಡ್ಡ ಬಸಪ್ಪ ದೇವಾಲಯ ಸೂಡಿಯ ಮಲ್ಲಿಕಾರ್ಜುನ ದೇವಾಲಯ, ಸವಡಿಯ ಶಂಕರನಾರಾಯಣ ದೇವಾಲಯ, ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ, ಮುಂತಾದವು ಶಿಲ್ಪಕಲೆಯ ಸುಂದರ ಸೌಧಗಳಾಗಿದ್ದು, ಪ್ರವಾಸಿಗರನ್ನು ಕೈಮಾಡಿ ಕರೆಯುತ್ತಿವೆ.

ಪಂ.ಭೀಮಸೆನ ಜೋಷಿ ಹಾಗೂ ಪುಟ್ಟರಾಜ ಗವಾಯಿಗಳು

ನರಗುಂದದ ಬಾಬಾ ಸಾಹೇಬನ ಅರಮನೆಯ ಭಿತ್ತಿಚಿತ್ರಗಳು ತುಂಬ ಮನಮೋಹಕವಾಗಿವೆ. ಚಿಂಚಲಿ ಗ್ರಾಮ ರಸ್ತೆಗೆ ಹೊಂದಿಕೊಂಡಿರುವ ಗುಡ್ಡದ ದಕ್ಷಿಣ ಭಾಗದಲ್ಲಿರುವ ಬೃಹತ್ ಕಲ್ಲಿನ ಮೇಲಿನ ಛಾಯಾ ಚಂದ್ರನಾಥ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ.

ಸಂಗೀತ ದಿಗ್ಗಜರು

ಅಂತರಾಷ್ಟ್ರೀಯ ಖ್ಯಾತಿಯ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪಂ.ಭೀಮಸೇನ ಜೋಶಿಯವರು ಗದುಗಿನವರು. ಉಭಯ ಗಾಯನ ಕಲಾವಿದ, ಆಸ್ಥಾನ ಸಂಗೀತ ವಿದ್ವಾನ್ ಡಾ.ಪುಟ್ಟರಾಜ ಕವಿ ಗವಾಯಿಗಳಲ್ಲಿ ನಾಡಿನ ಅನೇಕ ಹೆಸರಾಂತ ಗಾಯಕರು ತರಬೇತಿ ಪಡೆದಿದ್ದಾರೆ.

ಕ್ರೀಡಾಪಟುಗಳು

ಕ್ರಿಕೆಟ್ ತಾರೆ ಸುನೀಲ ಜೋಶಿ ಗದುಗಿನವರು. ಈ ಹಿಂದೆ ಹಾಕಿ ಮಾಂತ್ರಿಕ ಎಂದೇ ಪ್ರಸಿದ್ಧರಾದ ಶ್ರೀ ರಾಜು ಬಾಗಡೆ ಅವರೂ ಸಹ ಗದುಗಿನವರೆ.