Close

ತ್ರಿಕುಟೇಶ್ವರ ದೇವಸ್ಥಾನ ಗದಗ

‘ಸ್ವಯಂಭೂ ಈಶ್ವರ’, ‘ತ್ರೈಪುರುಷ’, ‘ಸ್ವಯಂಭೂ ತ್ರುಕುಟೇಶ್ವರ’ ಎಂದು ಕಾಲದಿಂದ ಕಾಲಕ್ಕೆ ಕರೆಸಿಕೊಂಡ ತ್ರಿಕುಟೇಶ್ವರ ದೇವಸ್ಥಾನ ಕ್ರಿ.ಶ. 1002ರಲ್ಲಿ ನಿರ್ಮಾಣವಾಗಿದೆ. ಇದು ಕಲ್ಯಾಣ ಚಾಲುಕ್ಯ-ವಾಸ್ತುಶಿಲ್ಪವಾಗಿದ್ದು, ಹೊಯ್ಸಳ ಹಾಗೂ ವಿಜಯನಗರ ಅರಸರಿಂದ ಇದು ಅಭಿವೃದ್ಧಿಗೊಂಡಿದೆ. ಗರ್ಭಗುಡಿಯಲ್ಲಿ ತ್ರುಕುಟೇಶ್ವರ ಸ್ಥಿತನಾಗಿದ್ದು ಇದು ಸ್ವಯಂಭೂ ಎಂದೂ, ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರತಿರೂಪವೆಂದೂ ‘ಕೃತಪುರ ಮಹಾತ್ಮೆ’ ಯಲ್ಲಿ ವಿವರಿಸಲಾಗಿದೆ.

ಕಲಾತ್ಮಕ ಕುಸುರಿ ಕೆತ್ತನೆಯಿಂದ ಕೂಡಿ, 42 ಕಂಬಗಳುಳ್ಳ ಸಭಾ ಮಂಟಪವಿದೆ. ಸಭಾಮಂಟಪದಲ್ಲಿ ನಡೆವ ನೃತ್ಯ ನೋಡಲು ಸುತ್ತಲೂ ಕಕ್ಷಾಸನಗಳಿವೆ. ಈ ದೇವಸ್ಥಾನದ ಸಭಾಮಂಟಪ ಹಾಗೂ ಅಂತರಾಳದ ಬಾಗಿಲು ಚೌಕಟ್ಟುಗಳ ಮೇಲಿನ ಪಟ್ಟಿಕೆಗಳಲ್ಲಿ ಸುಂದರ ಉಬ್ಬುಶೀಲ್ಪಗಳಿವೆ. ನೃತ್ಯ ಗಣಪತಿ, ಬ್ರಹ್ಮ, ಶಿವ, ವಿಷ್ಣು, ಕಾರ್ತಿಕೇಯ, ಗಜಲಕ್ಷ್ಮಿ, ಅಂತರಾಳದ ಗೋಡೆಯ ಹೊರ ಮೈಯಲ್ಲಿರುವ ಮಹಾಕಾಳಿ, ಮನ್ಮಥ, ಭೈರವ ಮುಂತಾದ ಶಿಲ್ಪಗಳಿವೆ. ಆರು ಹಸ್ತಗಳ ನೃತ್ಯ ಗಣಪತಿ, ನೃತ್ಯ ಭಂಗಿಯ ಅಷ್ಟ ಮಾತೃಕೆಯರು ಹಾಗೂ ಅಂಗೈಯಲ್ಲಿ ಶಿವಲಿಂಗಗಳನ್ನು ಹಿಡಿದುಕೊಂಡು ನಿಂತಿರುವ ದಂಪತಿಗಳ ಉಬ್ಬು ಚಿತ್ರಗಳು ಅಪರೂಪವಾಗಿವೆ. ಸಭಾಮಂಟಪದ ಈಶಾನ್ಯ ದಿಕ್ಕಿನಲ್ಲಿರುವ ನಟರಾಜನ ಮೂರ್ತಿಯು ತುಂಬ ಚೆಲುವಾಗಿ ಕೆತ್ತಲಾಗಿದೆ.