Close

ಲಕ್ಕುಂಡಿ

ಭಾರತದ ಮೂಲೆ ಮತ್ತು ಮೂಲೆಗಳಲ್ಲಿ ಹಲವು ಪುರಾತನ ವಾಸ್ತುಶಿಲ್ಪಗಳನ್ನು ನೋಡಲು ಹೆಮ್ಮೆಯೆನಿಸುತ್ತದೆ. ಇದು ನಮ್ಮ ಪೂರ್ವಜರು ಕಾರ್ಯನಿರ್ವಹಿಸುವ ಪ್ರತಿಭೆ ಮತ್ತು ಜ್ಞಾನವನ್ನು ತೋರಿಸುತ್ತದೆ. ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುವವರಿಗೆ ಲಕ್ಕುಂಡಿ ಒಂದು ಆಶೀರ್ವಾದ. ಲೋಹಿಗುಂಡಿ ತದನಂತರದಲ್ಲಿ ಲೋಕಿಗುಂಡಿಯಿಂದ ಈಗಿನ ಲಕ್ಕುಂಡಿಯಾಗಿದೆ. ಪ್ರತಿ ಶಿಲ್ಪ, ಸ್ತಂಭ ಮತ್ತು ದೇವಸ್ಥಾನದ ಬಗ್ಗೆ ತಿಳಿದುಕೊಳ್ಳಲು ಅತ್ಯಾಕರ್ಷಕವಾದ ಒಂದು ಕಥೆ ಇದೆ. ಸುಮಾರು 50 ದೇವಾಲಯಗಳು, 101 ಹಂತದ ಬಾವಿಗಳು ಮತ್ತು 29 ಶಾಸನಗಳನ್ನು ಈ ಪ್ರಶಾಂತ ಹಳ್ಳಿಯಲ್ಲಿ ಸಂರಕ್ಷಿಸಲಾಗಿದೆ.

ಕಾಶಿ ವಿಶ್ವೇಶ್ವರ ದೇವಾಲಯ :
ಲಕ್ಕುಂಡಿಯ ದೇವಾಲಯಗಳಲ್ಲಿ ಪ್ರಮುಖವಾದುದೆಂದರೆ ಕಾಶಿ ವಿಶ್ವೇಶ್ವರ ದೇವಾಲಯ. ಇದು ದ್ವಿಕೂಟವಾಗಿದ್ದು ಎರಡು ಗರ್ಭಗೃಹ, ಅರ್ಧಮಂಟಪ ಹಾಗೂ ನವರಂಗಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಗರ್ಭಗೃಹದ ದ್ವಾರ ಬಂಧವು ವಿಪುಲವಾದ ಕೆತ್ತನೆಗಳಿಂದ ಕೂಡಿದ್ದು ದ್ವಾರದ ಎರಡೂ ಕಡೆಗಳಲ್ಲಿ ವಾದ್ಯ ವಾದಕರ, ನರ್ತಕಿಯರ ಹಾಗೂ ಶಿಲಾಬಾಲಿಕೆಯರ ಹುಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ಅರ್ಧಮಂಟಪ ದ್ವಾರದ ಎರಡೂ ಕಡೆಗಳಲ್ಲಿ ಅಲಂಕೃತ ಕಂಬಗಳಿವೆ. ನರ್ತಕಿಯರಲ್ಲದೆ ಮಾನವ ಶರೀರದ ಅಸ್ಥಿಪಂಜರವನ್ನು ಹೊಂದಿರುವ ನಟರಾಜನ ಕಿರುಶಿಲ್ಪವು ಮೇಲ್ಭಾಗದ ಪದಕದಲ್ಲಿದೆ.
ನವರಂಗದಲ್ಲಿ ಪೂರ್ವಕ್ಕೆ ಹಾಗೂ ದಕ್ಷಿಣಕ್ಕೆ ವಿಪುಲವಾದ ಅಲಂಕಾರ ದ್ವಾರಬಂಧಗಳಿರುವ ಎರಡು ಪ್ರವೇಶದ್ವಾರಗಳಿವೆ. ನವರಂಗದ ಮಧ್ಯ ಭಾಗದಲ್ಲಿರುವ ನಾಲ್ಕು ಕಂಬಗಳಲ್ಲಿ ಶಿವಪುರಾಣದ ಕಥೆಗಳನ್ನು ಅಭಿವ್ಯಕ್ತಗೊಳಿಸುವ ಅನೇಕ ಉಬ್ಬು ಶಿಲ್ಪಗಳಿವೆ. ಹೊರಭಾಗದ ಗೋಡೆಯಲ್ಲಿ ಶಿವಪುರಾಣದ ಅನೇಕ ದೃಶ್ಯಗಳನ್ನು ಕೆತ್ತಲಾಗಿದ್ದು, ಆಕರ್ಷಕವಾದ ನಟರಾಜ, ನರ್ತನ ಭಾವಗಳನ್ನು ವ್ಯಕ್ತಪಡಿಸುವ ಮದನಿಕೆಯರ ಹಲವಾರು ಶಿಲ್ಪಗಳಿವೆ.

ಕಾಶಿ ವಿಶ್ವೇಶ್ವರ ದೇವಾಲಯ ಕುರಿತು ಸಂಗತಿಗಳು:

ಸಮಯ : ಶುಕ್ರವಾರ ಹೊರತುಪಡಿಸಿ 8 ರಿಂದ 5 ಗಂಟೆಗೆ
ಭೇಟಿ ನೀಡಲು ಉತ್ತಮ ಸಮಯ: ಮೇ ತಿಂಗಳು
ಉತ್ಸವ: ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ವಾರ್ಷಿಕ ಉತ್ಸವದ ಲಕುಂಡಿ ಉತ್ಸವ.

ನನ್ನೆಶ್ವರ ದೇವಾಲಯ :
ನನ್ನೇಶ್ವರ ದೇವಾಲಯದಲ್ಲಿ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ಮುಂಭಾಗದಲ್ಲಿ ತೆರೆದ ಮುಖಮಂಟಪಗಳಿವೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು, ನವರಂಗಕ್ಕೆ ಪೂರ್ವ ಹಾಗೂ ದಕ್ಷಿಣದಿಂದ ಎರಡು ಪ್ರವೇಶದ್ವಾರಗಳಿವೆ. ನವರಂಗದ ಕಂಬಗಳ ತುಂಬ ನುಣುಪಾಗಿದ್ದು ನೋಡುವವರ ಮುಖ ಪ್ರತಿಫಲಿಸಿವಂತಿವೆ. ಹೊರಗೋಡೆಯಲ್ಲಿ ಕೋಷ್ಠ ಪಂಜರಗಳಿವೆ. ನವರಂಗಕ್ಕಿರುವ ಮಹಾದ್ವಾರಬಂಧವು ಅಲಂಕಾರಿಕ ವಿಪುಲ ಕೆತ್ತನೆಗಳನ್ನು ಹೊಂದಿದೆ.