Close

ವೀರನಾರಾಯಣ ದೇವಸ್ಥಾನ ಗದಗ

ಹೊಯ್ಸಳ ದೊರೆ ಬಿಟ್ಟದೇವನು ಶ್ರೀ ರಾಮಾನುಜಾಚಾರ್ಯರಿಂದ ದೀಕ್ಷೆ ಪಡೆದು ವೈಷ್ಣವನಾದ ಮೇಲೆ ಗುರುವಿನ ಆಜ್ಞೆಯಂತೆ 1117ರಲ್ಲಿ ಶ್ರೀ ವೀರನಾರಾಯಣ ದೇವಸ್ಥಾನ ಕಟ್ಟಿಸಿದನೆಂದು ಪ್ರತೀತಿ ಇದೆ. ಆತ ಕಟ್ಟಿಸಿದ ಪಂಚನಾರಾಯಣ ದೇವಸ್ಥಾನಗಳಲ್ಲಿ ಇದೂ ಒಂದು. ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರ ಶಿಲ್ಪಗಳ ಸುಂದರ ಸಂಗಮ ಶ್ರೀ ವೀರನಾರಾಯಣ ದೇವಸ್ಥಾನ. ಗರ್ಭಗುಡಿ ಹಾಗೂ ಅದರ ಮೇಲಿನ ಶಿಲಾಗೋಪುರ ಚಾಲುಕ್ಯ ಶಿಲ್ಪದ ಮಾದರಯಲ್ಲಿದ್ದರೆ, ಗರುಡಗಂಭ, ರಂಗಮಂಟಪಗಳು ಹೊಯ್ಸಳ ಶಿಲ್ಪದ ಮಾದರಿಗಳಾಗಿವೆ. ಗುಡಿಯ ಮಹಾದ್ವಾರ ಗೋಪುರ ವಿಜಯನಗರ ಶೈಲಿಯದು.

ದೇವಸ್ಥಾನದ ಭವ್ಯ ಮಹಾದ್ವಾರವನ್ನು ದಾಟಿ ಒಳಗೆ ಪ್ರವೇಶಿಸಿದ ಕೂಡಲೇ ಎದುರಾಗುವುದು ಗರುಡಗಂಭ. ಈ ಕಂಭದ ಹತ್ತಿರ ಶ್ರೀವೈಷ್ಣವರ ಮೂರ್ತಿ ಇದೆ. ಮೆಟ್ಟಿಲು ಏರಿ ದೇವಸ್ಥಾನ ಪ್ರವೇಶಿಸಿದರೆ ಶಿಲ್ಪಕಲೆಯನ್ನರಳಿಸಿಕೊಂಡು ನಿಂತ ಕಂಭಗಳಿವೆ. ಇಲ್ಲಿಯೇ ಒಂದು ಕಂಭದ ಕೆಳಗೆ ಕುಳಿತು ಮಹಾಕವಿ ಕುಮಾರವ್ಯಾಸನು “ಕರ್ಣಾಟ ಭಾರತ ಕಥಾಮಂಜರಿ” ಬರೆದನೆಂದು ಪ್ರತೀತಿ. ನಂತರ ಬರುವು ಮಧ್ಯರಂಗ. ಆನಂತರ ಗರ್ಭಗುಡಿ.

ಗರ್ಭಗುಡಿಯಲ್ಲಿ ನೀಲಮೇಘಶ್ಯಾಮವರ್ಣ ಶಿಲೆಯಲ್ಲಿ ಕೆತ್ತಿದ ಶ್ರೀ ವೀರನಾರಾಯಣಸ್ವಾಮಿಯ ಅಪೂರ್ವ ವಿಗ್ರಹವಿದೆ. ಕಿರೀಟ, ಕರ್ಣಕುಂಡಲ, ಶಂಖ, ಚಕ್ರ, ಗದಾ, ಪದ್ಮ ಅಭಯಹಸ್ತಗಳಿಂದ ಭೂಷಿತನಾದ, ವೀರಗಚ್ಚೆ ಹಾಕಿನಿಂತ ಶ್ರೀ ವೀರನಾರಾಯಣ ಮೂರ್ತಿ ಮೋಹಕವಾಗಿದೆ. ವಿಶಾಲ ಪಕ್ಷಸ್ಥಲದಲ್ಲಿ ಲಕ್ಷ್ಮಿ, ಪೀಠ ಪ್ರಭಾವಳಿಯಲ್ಲಿ ದಶಾವತಾರ, ಎಡಬಲಗಳಲ್ಲಿ ಲಕ್ಷ್ಮೀ ಗರುಡರು ನಿಂತಿದ್ದಾರೆ. ಈ ದೇವಾಲಯದ ಪ್ರಾಂಗಣದಲ್ಲಿ ಲಕ್ಷ್ಮೀ ನರಸಿಂಹ ದೇವಾಲಯ, ಸರ್ವೇಶ್ವರ ದೇವಾಲಯ, ಮುಂತಾದ ಪರಿವಾರ ದೇವತೆಯ ಗುಡಿಗಳಿವೆ.